ಬಭ್ರುವಾಹನ
	ಅರ್ಜುನನ ಮಗ. ಮಣಲೂರು ರಾಜ್ಯದ ದೊರೆ ಚಿತ್ರಾಂಗದನ ಮಗಳು ಚಿತ್ರಾಂಗದೆಯಲಿ ಜನಿಸಿದವ. ಧರ್ಮರಾಯ ಪಾಂಚಾಲಿಯ ಸಂಗಡ ಏಕಾಂತದಲ್ಲಿರುವುದನ್ನು ಅಕಸ್ಮಾತ್ ಕಂಡ ಅರ್ಜುನ ಪ್ರಾಯಶ್ಚಿತ್ತಕ್ಕಾಗಿ ಒಂದು ವರ್ಷ ಅರಣ್ಯವಾಸ ಮಾಡಬೇಕಾಯಿತಷ್ಟೆ. ಆ ಸಮಯದಲ್ಲಿ ಗಂಗಾದ್ವಾರಕ್ಕೆ ಬಂದ ಅರ್ಜುನ ನಾಗಕನ್ಯೆ ಉಲೂಪಿಯನ್ನು ವಿವಾಹವಾದ. ಸ್ವಲ್ಪ ಕಾಲದಲ್ಲೆ ಮಣಲೂರ ರಾಜ ಚಿತ್ರಾಂಗದ ತನ್ನ ಮಗಳನ್ನು ಆತನಿಗೆ ಕೊಟ್ಟು ವಿವಾಹ ಮಾಡಿದ. ವಿವಾಹದನಂತರ ಮೂರು ತಿಂಗಳ ಕಾಲ ಅಲ್ಲೇ ಇದ್ದ ಅರ್ಜುನ ಪಂಚತೀರ್ಥಕ್ಕೆ ಭೇಟಿ ಕೊಟ್ಟು ಮೊಸಳೆಗಳಾಗಿ ತೀರ್ಥದಲ್ಲಿದ್ದ ಗಂಧರ್ವಕನ್ಯೆಯರಿಗೆ ಮೋಕ್ಷ ಕೊಟ್ಟು ಹಿಂದಿರುಗುವ ಹೊತ್ತಿಗೆ ಬಭ್ರುವಾಹನನ ಜನನವಾಗಿತ್ತು. ಅವರನ್ನೆಲ್ಲ ಹಸ್ತಿನಾವತಿಗೆ ಕರೆಸಿಕೊಳ್ಳುವುದಾಗಿ ವಚನವಿತ್ತು ಅರ್ಜುನ ಹಿಂದಿರುಗಿದ.

	ಮುಂದೆ ಮಹಾಭಾರತದ ಯುದ್ಧ ನಡೆದಾಗ ಅರ್ಜುನ ಮೋಸದಿಂದ ಭೀಷ್ಮನನ್ನು ಕೊಲ್ಲಲು ಭೀಷ್ಮನ ತಾಯಿ ಗಂಗಾದೇವಿ ದುಃಖದಿಂದ ಅರ್ಜುನನಿಗೆ ಅವನ ಮಗನಿಂದಲೆ ಸಾವು ಬರಲಿ ಎಂದು ಶಪಿಸಿದಳು. ಉಲೂಪಿಯಿಂದ ಈ ವಿಷಯ ತಿಳಿದ ಅವಳ ತಂದೆ ಗಂಗಾದೇವಿಯನ್ನು ಪ್ರಾರ್ಥಿಸಿ ಬೇಡಿಕೊಂಡಾಗ ಆಕೆ ಅರ್ಜುನ ತನ್ನ ಮಗ ಬಭ್ರುವಾಹನನಿಂದ ಸಾಯುವನೆಂದೂ ಮೃತಸಂಜೀವಿಯನ್ನು ಅವನ ಎದೆಯ ಮೇಲಿಟ್ಟರೆ ಜೀವ ಪಡೆವನು ಎಂದೂ ವಿಶಾಪ ನೀಡಿದಳು.

	ಮುಂದೆ ಪಾಂಡವರು ಅಶ್ವಮೇಧಯಾಗಕ್ಕೆ ತೊಡಗಿದಾಗ ಅರ್ಜುನ ಯಾಗಾಶ್ವದ ಬೆಂಗಾವಲಿಗೆ ಹೊರಟು ಮಣಲೂರಿಗೆ ಬಂದಾಗ ಬಭ್ರುವಾಹನ ಉಲೂಪಿಯ ಸಲಹೆ ಮೇರೆಗೆ ಯಾಗಾಶ್ವವನ್ನು ತಡೆದು ಅರ್ಜುನನೊಂದಿಗೆ ಯುದ್ಧಕ್ಕೆ ನಿಂತು ಅವನನ್ನು ಕೊಲ್ಲುತ್ತಾನೆ. ಈ ದುರ್ವಾರ್ತೆ ಎಲ್ಲೆಡೆಯಲ್ಲೂ ಹರಡುತ್ತದೆ. ಚಿತ್ರಾಂಗದೆಗೆ ಅತ್ಯಂತ ದುಃಖವಾಗುತ್ತದೆ. ಆ ಕ್ಷಣವೆ ಉಲೂಪಿ ಪಾತಾಳಕ್ಕೆ ಹೋಗಿ ಮೃತಸಂಜೀವಿನಿಯನ್ನು ತಂದು ಅರ್ಜುನನನ್ನು ಬದುಕಿಸುತ್ತಾಳೆ. ಅವರನ್ನೆಲ್ಲ ಅರ್ಜುನ ಹಸ್ತಿನಾವತಿಗೆ ಕರೆದುಕೊಂಡು ಹೊಗುತ್ತಾನೆ. ಅಲ್ಲಿ ಶ್ರೀಕೃಷ್ಣ ಬಭ್ರುವಾಹನನಿಗೆ ದಿವ್ಯಾಶ್ವಗಳಿಂದ ಸಜ್ಜಿತವಾದ ರಥವನ್ನು ಉಡುಗೊರೆಯಾಗಿ ನೀಡುತ್ತಾನೆ.

ಕನ್ನಡದಲ್ಲಿ ಕುಮಾರವ್ಯಾಸ ಬಭ್ರುವಾಹನನ ಪಾತ್ರವನ್ನು ಸೊಗಸಾಗಿ ಬೆಳೆಸಿದ್ದಾನೆ. ಕುವೆಂಪು ಅವರು ಅವನ ವೃತ್ತಾಂತವನ್ನು ಚಿತ್ರಾಂಗದ ಎಂಬ ಕಾವ್ಯದಲ್ಲಿ ವಿಶದವಾಗಿ ಕಾವ್ಯಮಯವಾಗಿ ವರ್ಣಿಸಿದ್ದಾರೆ.
(ಬಿ.ಎನ್.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ